ಮಹಿಪತಿದಾಸ : -		
1611-81.ಕನ್ನಡದ ಪ್ರಸಿದ್ಧ ಹರಿದಾಸರು. ಅಥಣಿ ತಾಲ್ಲೂಕಿನ ಐಗಳಿ ಜನ್ಮಸ್ಥಳ. ಕೊನೇರರಾಯ ಇವರ ತಂದೆ ಹಾಗೂ ವಿದ್ಯಾಗುರು. ಇವರು ವೇದಶಾಸ್ತ್ರಗಳು ಅಧ್ಯಯನದೊಂದಿಗೆ ಇತರ ಭಾಷೆಗಳನ್ನೂ ಕಲಿತರು. ಇವರಿಗೆ ಸಂಸ್ಕøತ, ಕನ್ನಡ, ಮರಾಠಿ, ತೆಲುಗು, ಉರ್ದು, ಪಾರಸೀ ಭಾಷೆಗಳಲ್ಲಿ ಪಾಂಡಿತ್ಯವಿತ್ತು. ತೀರ ಬಡಕುಟುಂಬದಲ್ಲಿ ಹುಟ್ಟಿದ್ದರೂ ಸ್ವಸಾಮಥ್ರ್ಯದಿಂದ ವಿಜಯಪುರದ (ಬಿಜಾಪುರ) ಬಾದಶಹನ ದಿವಾನರಾಗಿ ರಾಜಮನ್ನಣೆಗೂ ಪಾತ್ರರಾದರು.

ಶಹನಂಗಾ ಎಂಬ ಫಕೀರರಿಂದ ಹಾಗೂ ಭಾಸ್ಕರ ಸ್ವಾಮಿಗಳ ಅನುಗ್ರಹದಿಂದ ದಾಸರ ಜೀವನದ ದಿಕ್ಕೇ ಬದಲಾಯಿತು. ಲೌಕಿಕ ಜೀವನದ ಮೋಹ ಕಡಿಮೆಯಾಗಿ ಸಾರವಾಡದಲ್ಲಿ ಗುರು ಭಾಸ್ಕರ ಸ್ವಾಮಿಗಳ ಬಳಿಯೇ ನಿಂತು. ವಿಜಯಪುರದ ತಮ್ಮ ದಿವಾನ ಹುದ್ದೆಗೆ ರಾಜೀನಾಮೆ ಇತ್ತು. ಸತತ ಯೋಗಾಭ್ಯಾಸದಲ್ಲಿ ತೊಡಗಿದರು. ಹನ್ನೆರಡು ವರ್ಷಗಳಲ್ಲಿ ಮುಗಿಯುವಂಥ ಯೋಗಾಭ್ಯಾಸವನ್ನು ಕೇವಲ ಹನ್ನೊಂದು ತಿಂಗಳನಲ್ಲಿ ಕಲಿತು ಮುಗಿಸಿದರು. ಅನಂತರ ಗುರುಗಳ ಅಪ್ಪಣೆಯಂತೆ ವಿಜಯಪುರಕ್ಕೆ ಬಂದು, ತಮ್ಮ ಶಿಷ್ಯರಿಗೆ ಯೋಗಾಭ್ಯಾಸ ಮಾಡಿಸುತ್ತಿದ್ದರು. ನಾಲ್ಕಾರು ವರ್ಷಗಳ ಅನಂತರ ಸಾರಮಾಡುವ ಹತ್ತಿರವಿದ್ದ ಕಾಖಂಡಕಿ ಗ್ರಾಮದಲ್ಲಿ ನೆಲೆಸಿದರು. ಇಲ್ಲಿ ದಾಸರಿಗೆ ಪತ್ನಿವಿಯೋಗವಾಯಿತು. ಇವರಿಗೆ ದೇವರಾಯ ಮತ್ತು ಕೃಷ್ಣರಾಯ ಎಂಬ ಇಬ್ಬರು ಮಕ್ಕಳಿದ್ದರು.

ದಾಸರ ಯೋಗಸಿದ್ಧಿ ವಿಶಾಲ ಮನೋಭಾವದ ಬೆಳೆವಣಿಗೆ ಆಸ್ಪದ ನೀಡಿತು. ಎಲ್ಲ ಜಾತಿಮತಗಳವರೂ ಇವರ ಶಿಷ್ಯರಾಗಿದ್ದರು. ಪರಮ ತ್ಯಾಗಿಗಳೆಂದು ಪ್ರಖ್ಯಾತರಾಗಿದ್ದ ಇವರು ಸಾಮಾನ್ಯ ಜನತಗೆ ಪರಮಾರ್ಥ ಬೋಧಿಸುವುದನ್ನು ತಮ್ಮ ಜೀವನದ ಗುರಿಯಾಗಿಟ್ಟುಕೊಂಡಿದ್ದರು. ಜನಸಾಮಾನ್ಯರಿಗಾಗಿ ಲಾವಣಿ, ಕೋಲಾಟಪದ, ಸುಗ್ಗಿಯಪದ, ಕೊರವಂಜಿಪದ ಮೊದಲಾದ ಜನಪದ ಮಟ್ಟುಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಷಟ್ಪದಿ. ಸಾಂಗತ್ಯ, ರಗಳೆಗಳನ್ನೂ ಕಾಣಬಹುದು. ಸ್ತೋತ್ರಗಳಿಂದ ಹಿಡಿದು ಕುಟ್ಟುವ ಪದಗಳು ಜೋಗುಳದ ಪದಗಳವರೆಗೆ ಅವುಗಳ ವೈವಿಧ್ಯವಿದೆ. ಹಿಂದಿ, ಮರಾಠಿ ಭಾಷೆಗಳಲ್ಲೂ ದಾಸರು ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಹೆಚ್ಚಿನವು ಇವರ ಆಧ್ಯಾತ್ಮಿಕ ಅನುಭವ ಹಾಗೂ ಯೋಗಸಿದ್ಧಿಗಳ ಪ್ರತಿಬಿಂಬದಂತಿದ್ದ ಶಿವಶರಣರ ಹಾಡುಗಳನ್ನು ನೆನಪಿಗೆ ತರುತ್ತವೆ. ಸರಳ ಶೈಲಿಯಲ್ಲಿರುವ ಇವರ ಕೀರ್ತನೆಗಳು ಪಂಡಿತ ಪಾಮರರ ಮೆಚ್ಚಿಕೆಗೆ ಪಾತ್ರವಾಗಿವೆ.

 ಎಪ್ಪತ್ತು ವರ್ಷಗಳ ತುಂಬುಬಾಳನ್ನು ಬಾಳಿದ ದಾಸರು ತಮ್ಮ ಕೊನೆಗಾಲದಲ್ಲಿ ಬಿಜಾಪುರ ಜಿಲ್ಲೆಯ ಕೊಲ್ಲಾರಕ್ಕೆ ಹೋಗಿ ತಮ್ಮ ಕುಲಗುರುಗಳ ಬಳಿ ಕೆಲವು ದಿನಗಳಿದ್ದರು. ಅಲ್ಲಯೇ 1681ರಲ್ಲಿ ಕೊನೆಯುಸಿರೆಳೆದರು. ಇಲ್ಲಿ ಇವರ ಹೆಸರಿನಲ್ಲಿ ವೃಂದಾವನವನ್ನು ಕಟ್ಟಲಾಗಿದೆ. ಕಾಖಂಡಕಿಯಲ್ಲಿಯೂ ದಾಸರು ಪೂಜಿಸುತ್ತಿದ್ದ ಸಾಲಿಗ್ರಾಮದ ಮೇಲೆ ವೃಂದಾವನವನ್ನು ಕಟ್ಟಿಸಿದ್ದು ವರ್ಷಕ್ಕೊಮ್ಮೆ ರಾಯರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ